Wednesday, November 16, 2011

College Gate, Paramatma -- A(na)rtha

ನಮ್ಮ ಯೋಗರಾಜ್ ಭಟ್ಟರು ಬರ್ದಿರೋ "ಪರಮಾತ್ಮ" ಚಲನಚಿತ್ರದ "ಕಾಲೇಜ್ ಗೇಟ್" ಹಾಡನ್ನ ಅ(ನ)ರ್ಥ ಮಾಡ್ಕೊಳೋ/ ಮಾಡ್ಸೋ ಒಂದು ಸಣ್ಣ ಪ್ರಯತ್ನ. ಹಾಗೇ ನನ್ನ ಈ blogಗೆ ನಾಂದಿ ಹಾಡೋಕೆ ಒಂದು ನೆಪ. ;-)

ತಪ್ಪಿದ್ದ್ರೆ ಅಥ್ವಾ ಬೈಬೇಕು ಅನ್ಸಿದ್ರೆ ಕಾಮೆಂಟ್ ಬರೀರಿ. ಇಷ್ಟ ಆದ್ರೆ ಎರ್ಡ್ ಲೈನ್ ಎಕ್ಸ್ಟ್ರಾ ಬರೀರಿ.  ಮೆಂಟಲ್ ನನ್ ಮಗ, ಮಾಡೋಕ್ ಕೆಲಸ ಇಲ್ಲ ಅನ್ಸುತ್ತೆ ಅಂತ ಅನ್ಸಿದ್ರೆ ಅದ್ನೂ ಬರೀರಿ. But ಅದು ನಂಗೆ ಗೊತ್ತಿರೋ ವಿಷ್ಯ. :P

ಈಗ ಶುರು ಮಾಡೋಕೆ ಮುಂಚೆ ಹಾಡ್ ನೋಡ್ಬಿಡಿ -- 


 
 _____________________________

ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ ಕಾಪಾಡೋ.. ಚೊಂಬೆಶ್ವರ... ಆ‌ಆ...
ಆ ಚೊಂಬೆಶ್ವರ ಅನ್ನೊ ದೇವ್ರಿಗೆ ಕವಿ "ಕಾಲೇಜ್ನಲ್ಲಿ ಫೇಲಾಗಿ ಮತ್ತೆ ಕ್ಲಾಸ್ಗೆ ಬರ್ತಾರಲ್ಲ ಅವ್ರನ್ನ ಜನ ಒಂಥರ ಕೀಳುಭಾವನೆ ಇಂದ ನೋಡಿ ಇವ್ರ ಮನ್ಸಿಗೆ ಬೆಜಾರ್ ಆಗ್ದೇರೊ ಥರ ನೊಡ್ಕೊಳಪ್ಪ" ಅಂತ ಬೇಡ್ಕೊಳ್ತಾರೆ... ಯಾಕಂದ್ರೆ ಇವ್ರು ಆಗ್ಲೆ ಫೇಲಾದ್ವಲ್ಲ ಅಂತ ನೊಂದಿರ್ತಾರೆ, ಅದ್ರ ಜೊತೆ ಇವ್ರನ್ನ ಸುತ್ತ ಮುತ್ತ ಇರೋ ಜನ ಕೂಡ ಹೀಯಾಳ್ಸಿದ್ರೆ ಇನ್ನೇನಾದ್ರೂ ಹೆಚ್ಚು ಕಮ್ಮಿ ಮಾಡ್ಕೋತಾರೆ ಅನ್ನೊ ಕಾಳಜಿ ಕವಿಗ್ಳಿಗೆ.

ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು..
ಎನ್ ಮಾಡ್ಲಿ.. ಮಾಡ್ಲಿ... ಚೊಂಬೆಶ್ವರ...
ಈ ಮಾತು ಒಬ್ಬ ಫೇಲಾದ ವಿದ್ಯಾರ್ಥಿ ಹೇಳೋದು. "ಯಾಕೆ ಸೊನ್ನೆ ರೌಂಡಾಗೇ ಇರ್ಬೇಕು, ಬೇರೆ ಶೇಪ್ನಲ್ ಯಾಕಿರ್ಬಾರ್ದು?" ಅನ್ನೋದು ಅವ್ನ ಯೋಚ್ನೆ. ಫೇಲಾಗಿರೋ ದುಃಖದ ಸಮ್ಯದಲ್ಲೂ ಈ ವಿದ್ಯಾರ್ಥಿ ಬುದ್ಧಿ ಒಂದು ಇನ್ನೋವೇಟಿವ್ ಐಡಿಯ ಕೊಡೋಷ್ಟು ಚುರುಕಾಗಿದ್ಯಲ್ಲಾ ಅದ್ನ ನಾವು ಅಪ್ಪ್ರಿಶಿಯೇಟ್ ಮಾಡ್ಬೇಕು.

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
ಉಸಿರಾಡು ಆಡು ಆಡು ಆಡು ಅಂತಾನೆ...

ಇದ್ನೂ ಕೂಡ ಒಬ್ಬ ಫೇಲಾದ್ ವಿದ್ಯಾರ್ಥಿನೇ ಹೇಳೋದು. ನಮ್ಮ ಭಾರತೀಯ ಸಂಸ್ಕೃತಿನಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ದೇವ್ರು ಇರ್ತಾನೆ, ಮತ್ತೆ... ಹೃದಯದಲ್ಲಿ ದೇವ್ರು ನೆಲ್ಸಿರ್ತಾನೆ ಅನ್ನೊ ನಂಬ್ಕೆ ಇದೆ. ಇಲ್ಲಿ ಆ ವಿದ್ಯಾರ್ಥಿ ಒಳ್ಗಿರೋ ಆ ಚೊಂಬೇಶ್ವರ ಪರಮಾತ್ಮ ಮಾತಾಡಿ, ನೀನೇನೂ ಧೈರ್ಯ ಕಳ್ಕೊಂಡು ಉಸಿರು ನಿಲ್ಲೋಂಥ ಅನಾಹುತ ಮಾಡ್ಕೊಬೇಡ ಅಂತ ಹೇಳ್ತಾನಂತೆ. ಇಲ್ಲಿ ಕವಿ ಯೋಗ್ರಾಜ್ ಭಟ್ಟ್ರು ದೇವ್ರು ಯಾರನ್ನೂ ಭೇದ ಭಾವದಿಂದ ನೋಡೋಲ್ಲ ಅನ್ನೊ ಮಾತನ್ನ ಕೂಡ ತಿಳ್ಸ್ಕೊಡ್ತಾರೆ. ಜೊತೆಗೆ "ಒಬ್ಬ" ಅನ್ನೊ ಪದಾನ ಮೂರ್ಸರ್ತಿ ಉಪ್ಯೋಗ್ಸಿ ಅವ್ರು ದೇವನೊಬ್ಬ ನಾಮ ಹಲವು ಅನ್ನೊ ಮಾತ್ನ ಕೂಡ ಹೇಳ್ತಾರೆ.

ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸ್ ಆಗು ಆಗು ಆಗು ಅಂತಾನೆ..

ಇಲ್ಲಿ ಮೊದಲ್ನೆ ಸಾಲ್ ಇದ್ಯಲ್ಲ, ಅದು ಕನ್ನಡ ಹಾಡುಗ್ಳಲ್ಲಿ ತುಂಬ ರೇರ್ ಅಂತಾನೆ ಹೇಳ್ಬೇಕು. ನಮ್ಮ ಕನ್ನಡದಲ್ಲಿ ತಾಯಿ ಬಗ್ಗೆ ನೂರಾರ್ ಹಾಡುಗಳ್ನ ಬರ್ದಿದಾರೆ. ಆದ್ರೆ ಇಲ್ಲಿ ತಂದೆ ಬಗ್ಗೆ ಹೇಳ್ತಾರೆ. ಆ ವಿದ್ಯಾರ್ಥಿಗೆ, ಅಥ್ವಾ ಇನ್ ಜೆನೆರಲ್, ಮಕ್ಕ್ಳಿಗೆ ತನ್ನ ತಂದೆ ಒಬ್ಬ ಪುಣ್ಯಾತ್ಮ ಅನ್ನೊ ಗೌರವ, ಪೂಜ್ಯ ಭಾವನೆ ಇದೆ. ಇಲ್ಲಿ ಕವಿ "ಅಪ್ಪ" ಅನ್ನೊ ಪದ ಮೂರ್ಸರ್ತಿ ಉಪ್ಯೋಗ್ಸಿ ಅಂಥ ವಿದ್ಯಾರ್ಥಿಗ್ಳಿಗೆ ತಂದೆ ಅನ್ನೋ ವ್ಯಕ್ತಿ ಎಷ್ಟು ಮುಖ್ಯ ಅಂತ ಒತ್ತಿ ಒತ್ತಿ ಹೇಳ್ತಾರೆ.

ಮತ್ತೆ ಎರ್ಡ್ನೇ ಸಾಲ್ ಕೇಳ್ದಾಗ, ಪ್ರತ್ಯೊಬ್ಬ ತಂದೆ ತನ್ನ ಮಕ್ಳ ಮೇಲೆ ಪಾಸ್ ಆಗೋಕೆ ಪ್ರೆಶರ್ ಹಾಕ್ತಾರೆ ಅನ್ನೊದು ಗೊತ್ತಾಗುತ್ತೆ. ಇಲ್ಲಿ ತಂದೆ ಪಾಸ್ ಆಗು ಅಂತ ಪದೇ ಪದೇ ಹೇಳಿ ಹೇಗೆ ಪ್ರೆಶರ್ ಜಾಸ್ತಿ ಮಾಡ್ತಾರೆ ಅನ್ನೋದ್ನ "ಆಗು" ಪದಾನ ಮೂರ್ಸರ್ತಿ ಉಪ್ಯೊಗ್ಸೋದ್ರ ಮೂಲ್ಕ ಹೇಳ್ತಾರೆ.

ಫೇಲ್ ಆಗಾದವರುಂಟೆ ಚೊಂಬೆಶ್ವರ..
ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ...
ಈ ಮಾತ್ನ ಸ್ಟೀವ್ ಜಾಬ್ಸ್ ಕೂಡ ಹೆಳ್ತಾರೆ. ಫೇಲ್ ಆಗ್ಬೆಕು, ಆದ್ರೆ ಎಷ್ಟ್ ಬೇಗಾ ಆದ್ರೆ ಅಷ್ಟೂ ಒಳ್ಳೇದು. ಕೆಲವ್ರು ಸ್ವಂತ ಬಿಸಿನೆಸ್ ಹಾಕೊ, ಅಥ್ವಾ ಯಾವ್ದೊ ತಮ್ಗೆ ಇಷ್ಟ ಇಲ್ದೆ ಇರೊ ಕೆಲ್ಸಕ್ಕೆ ಸೇರ್ಕೊಂಡೋ, ಮೊದ್ಲು ಕೈ ಸುಟ್ಕೊಂದು, ಅದ್ರಿಂದ ಕಲ್ತು, ಆಮೆಲೆ ಸಕ್ಸಸ್ ಆಗ್ತಾರೆ. ಆದ್ರೆ ಇಲ್ಲಿ ಭಟ್ಟ್ರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕೆಲ್ಸಕ್ಕೆ ಸೇರ್ಕೋಳೋಕು ಮುಂಚೆ, ಅಂದ್ರೆ ಕಾಲೇಜ್ನಲ್ಲೇ ಫೇಲಾಗಿ, ಅದ್ರಿಂದ ಕಲ್ತು ಮುಂದೆ ಉದ್ಧಾರ ಆಗಿ ಅಂತಾರೆ.

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...

ಇಷ್ಟೊಂದು ಗ್ಯಾನ್ ಕೊಟ್ಮೇಲೆ ಅದ್ನ ಜೀರ್ಣ ಮಾಡ್ಕೊಳೋಕೆ ಕೊಟ್ಟಿರೋ ಬ್ರೇಕ್ ಇದು.

ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು.... ಮೂರ್ ಮೂರ್ಲಾ ಮೂರು.. ಬೈ-ಹಾರ‍್ಟು ಮಾಡು..
ಓ ಮೈ ಗಾಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್...

 ಇಲ್ಲಿ ಸರ್ಕಾಸ್ಮ್ ಇದೆ. ಒಂದೊಂದ್ಲಾ ಒಂದು, ಎರ್ಡೆಡ್ಲಾ ಎರ್ಡು ಅಂತೆಲ್ಲ ಬೈ-ಹಾರ್ಟ್ ಮಾಡು, ಆಗ ಜನ, ಅಯ್ಯೋ ಗಾಡ್ಜಿಲ್ಲ ಎಂಥ ಕ್ಯಾಲ್ಕ್ಯುಲೇಶನ್ ಅಂತ ತಲೆ ಚೆಚ್ಕೊತಾರೆ ಅನ್ತಾರೆ ಕವಿ. ಇಲ್ಲಿ ಸರ್ಕಾಸ್ಮ್ ಇರೊದ್ರಿಂದ ಕವಿ ಚೊಂಬೆಶ್ವರ ಬದ್ಲು ಗಾಡ್ಜಿಲ್ಲ ಅಂತ ಉಪ್ಯೋಗ್ಸ್ತಾರೆ.

ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ,
ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು..
ಮಕ್ಳು ಉದ್ಧಾರ ಆಗೋಕೆ ಹೈಯೆಷ್ಟು ಮಾರ್ಕ್ಸು ಬೇಕಾಗಿಲ್ಲ, ಅದ್ಕಿಂತ ಮುಖ್ಯವಾಗಿರೊದು ಇನ್ನು ಎಷ್ಟೊ ಇದೆ ಜೀವನ್ದಲ್ಲಿ. ಮಾರ್ಕ್ಸೇ ಮುಖ್ಯ ಅನ್ಕೊಂಡು ಅದ್ನ ಕೊಡೊವ್ನು ಕೂಡ ಮೂರ್ಖ ಅನ್ತಾರೆ ಕವಿ.
"ಅರ್ಧಕ್ಕೆ ಕೋರ್ಸು ಬಿಟ್ಟೊವ್ನೆ ಬಾಸು" ಮಾತ್ನ ನಮ್ಮ ಅಜೀಮ್ ಪ್ರೇಮ್ಜಿ, ಸ್ಟೀವ್ ಜಾಬ್ಸ್ ಇವ್ರೆಲ್ಲ ಪ್ರೂವ್ ಮಾಡಾಗಿದೆ. ಅವ್ರ ಒದನ್ನ ಅರ್ಧಕ್ಕೆ ನಿಲ್ಸಿ ಈಗ ಅವ್ರೆಲ್ಲ ದೊಡ್-ದೊಡ್ ಕಮ್ಪ್ನೀ ಬಾಸ್ ಆಗಿಲ್ವೆ.

ಮ್ಯೂಸಿಕ್ಕೆ ಸರಿ ‌ಇಲ್ಲ ಏಳೇ ಸ್ವರ..
ಇನ್ನೆಷ್ಟು ಕೂಗೋದು ಎಮ್ಮೆ ತರ.. ತರ.. ತರ.. ತರ...
ಇಲ್ಲಿ ಮತ್ತೆ ಇನ್ನೋವಟೀವ್ ಥಿಂಕಿಂಗ್ ಉದಾಹರ್ಣೆ. ಇರೊ ಆ ಏಳು ಸ್ವರ್ದಲ್ಲಿ ಎಮ್ಮೆ ಥರ ಎಷ್ಟು ಸರ್ತಿ ಕೂಗೋದು ಅಂತ ವಿದ್ಯಾರ್ಥಿ ಯೋಚ್ನೆ. ಬಹುಷಃ ಈ ವಿದ್ಯಾರ್ಥಿಗೆ ಎಂಟ್ನೇ ಸ್ವರ ಕಂಡು ಹಿಡ್ಯೋ ಪ್ಲಾನ್ಸ್ ಇರ್ಬೇಕು.

ಟ್ರೈ ಮಾಡು ಏನಾದ್ರೂ ಬ್ಯಾರ ತರ...
ಸೈಕಲ್ಲಿನಲಿ ಏರು ತೆಂಗಿನ್-ಮರ.. ಮರ...ಮರ....ಮರ...
ಬೀ ಡಿಫ್ರೆಂಟ್ ಅಂತ ಹೇಳ್ತಾರೆ ಕವಿ ಇಲ್ಲಿ. ಅವ್ರು ಕೊಟ್ಟಿರೋ ಸೈಕಲ್ನಲ್ಲಿ ತೆಂಗಿನ್ ಮರ ಏರೊಕೆ ಟ್ರೈ ಮಾಡು ಉದಾಹರ್ಣೆ ಬರೀ ಇನ್ನೋವಟೀವ್ ಮಾತ್ರ ಅಲ್ಲ, ಆ ಐಡಿಯ ವರ್ಕೌಟ್ ಆದ್ರೆ ನಮ್ಮ ದೇಶದ ಸಾವ್ರಾರು ತೆಂಗು ಬೆಳೆಗಾರಿಗೆ ಮಾಡೊ ಜನಸೇವೆ ಕೂಡ.

ಕೆ ರಾಮ.. ಪೀಯುಸಿಯಲ್ಲ್ ಒಮ್ಮೆ ಡುಮ್ಕಿ...
ಆಮೇಲೆ ಡೆಗ್ರೀಲಿ ಮೂರ್ ಮೂರೂ ಬಾಕಿ...

ಇಲ್ಲಿ ಫೇಲ್ ಆಗಿ ಅನ್ನೋದಕ್ಕೆ ಕೆ.ರಾಮ ಅನ್ನೊ ಲೈವ್ ಉದಾಹರ್ಣೆ ಕೊಡ್ತಾರೆ ಕವಿ.

ಎಗ್ಸಾಮ್ ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗು ಷೋಗೆ ಹೋಗು ಕಂದ ಅಂತಾನೆ..

ದರ್ಶಕತ್ವ, ನಟನೆ, ಇಂಥಾ ಕಲೆಗಳಲ್ಲಿ ಆಸಕ್ತಿ ಇರೋ ವಿದ್ಯಾರ್ಥಿಗ್ಳಿಗೆ ಪರಮಾತ್ಮ ಎಗ್ಸಾಮ್ ಹಾಲ್ನಲ್ಲೂ ಸಹ ಬಂದು ಹೊಸ ಸಿನೆಮಾ ಬಂದಿದೆ, ಮೊದ್ಲು ಅದ್ನ ನೋಡು ಹೋಗು ಅಂತ ಸಂದೇಶ ಕೊಡ್ತಾನನ್ತೆ. ಚೊಂಬೆಶ್ವರನ್ಗೆ ಅಂಥಾ ವಿದ್ಯಾರ್ಥಿಗ್ಳಲ್ಲಿ ಮೋಸ್ಟ್ಲಿ ವಿಶೇಷ ಪ್ರೀತಿ ಇರ್ಬೇಕು.

ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಹಿಂದಿನ್ ಸಾಲ್ನಲ್ಲಿ ಕಲಾಸಕ್ತಿ ಇರೊ ವಿದ್ಯಾರ್ಥಿ ತನ್ನ ಅನುಭವದ ಬಗ್ಗೆ ಹೇಳ್ದ್ರೆ ಇಲ್ಲಿ ಸೈಂಟಿಸ್ಟ್ ಆಗೊ ವಿದ್ಯಾರ್ಥಿ ತನ್ನ ಅನುಭವ ಹೇಳ್ತಾನೆ. ಅಂಥ ವಿದ್ಯಾರ್ಥಿ ಆನ್ಸರ್ ಶೀಟ್ನಲ್ಲಿ, ಪ್ರಶ್ನೆ ಪತ್ರಿಕೆಲಿರೋ ಪ್ರಶ್ನೆಗೆ ಉತ್ತ್ರ ಬರ್ಯೊ ಬದ್ಲು, ಆ ಪ್ರಶ್ನೇಗೇ ಪ್ರಶ್ನೆ ಹಾಕಿದ್ನನ್ತೆ. ಅದ್ಕೆ ಅವ್ನು ಪುಣ್ಯಾತ್ಮ ಅಂತ ಹೆಮ್ಮೆಯಿಂದ ಹೇಳ್ಕೊತಾನೆ.

ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ..
ಸಿಲಬಸ್ಸು ಇರ್ಬಾರ್ದ ಸಿನಿಮಾ ತರ...
ಸಬ್ಜೆಚ್ಟ್, ಸಿಲಬಸ್ ಇವೆಲ್ಲ ಸರಿ ಇಲ್ಲ ಅನ್ನೋದು ನಮ್ಮ ಎಡುಕಶನ್ ಸಿಸ್ಟಮ್ನ ಕಾಡ್ತಾ ಇರೊ ಮೂಲ ಭೂತ. ಅದ್ಕೆ ಇಲ್ಲಿ ವಿದ್ಯಾರ್ಥಿ ಕೊಡೊ ಸಲ್ಯುಶನ್ ಅಂದ್ರೆ, ಸಿಲಬಸ್ ಒಂದು ಹ್ಯಾರಿ ಪಾಟ್ಟರ್ ಪಿಚ್ಚರ್ ಥರಾನೊ ಅಥ್ವಾ ಜೋಗಿ ಪಿಚ್ಚರ್ ಥರಾನೋ ಥರ ಇದ್ರೆ, ಆಗ ನಮ್ಮ ವಿದ್ಯಾರ್ಥಿಗ್ಳು ಸಿನೆಮಾನ ಎಷ್ಟು ಆಸಕ್ತಿ ಇಂದ ನೋಡಿ ಅರ್ಥ ಮಾಡ್ಕೊತಾರೊ ಹಾಗೆ ನೋಡಿ, ಚರ್ಚೆ ಮಾಡ್ತಾರೆ ಅನ್ನೊದು.

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
ಮತ್ತೆ ಇಲ್ಲಿ ಜೀರ್ಣ ಮಾಡ್ಕೊಳೋಕೆ ಬ್ರೇಕ್.

ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು
ಡೌಟ್-ಇದ್ರೆ ಹುಡ್ಗಿರ್ರ್‌ನ ಕೇಳು ಗುರು...ಗುರು...ಗುರು...ಗುರು...
ಹುಡ್ಗೀರು ಹುಡುಗ್ರಗಿಂತಾ ಓದೋದ್ರಲ್ಲಿ ಮುಂದು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಅದ್ಕೆ ಕವಿ ಇಲ್ಲಿ, ಏನಾದ್ರೂ ಡೌಟ್ ಇದ್ರೆ ಹುಡ್ಗೀರ್ನ ಕೇಳು ಅಂತಾರೆ.

ಇಲ್ಲಿಂದ ಹೋಗ್ತಾರ ಯಾರಾದರೂ...
ಕಾಲೇಜು ಟೆಂಪಲ್ಲು ಇಲ್ಲೇ ಇರು...ಇರು...ಇರು...ಇರು...ಇರು...
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ಕಾಲೇಜು ದೇವಸ್ಥಾನದ ಥರ. ಇಂಥ ಪುಣ್ಯಕ್ಷೇತ್ರಾನ ಬಿಟ್ಟು ಹೋಗ್ಬೇಡ. ನಿನ್ ಕಾಲು ಭಗವಂತ ನಿನ್ನ ಪರೀಕ್ಷೆ ಮಾಡೋಕೆ ಹಾಕಿರೊ ಟೋಪಿ. ಆದ್ರೆ ಯಾವತ್ತೂ ಗ್ನಾನ್ಪ್ಕ ಇಟ್ಕೊ, ಪಾಸ್ ಆದ್ವಿ ಅಂಥ ಈ ಪುಣ್ಯಕ್ಷೇತ್ರದಿಂದ ಹೋದವ್ರು ಪಾಪಿಗ್ಳು ಅಂತಾರೆ ಕವಿ.

ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ.
ಇದ್ರಲ್ಲಿ ನಾವು ಎರ್ಡು ವಿಷ್ಯ ಅರ್ಥ ಮಾಡ್ಕೊಬಹುದು. ಒಂದು, ಶ್ರೀಕೃಷ್ಣ ಪರಮಾತ್ಮನ್ಗೆ ಡಿಗ್ನಿಟಿ ಆಫ್ ಲೇಬರ್ ಇರ್ಲಿಲ್ಲ. ಅವ್ನು ಎಷ್ಟೇ ಪವರ್ಫುಲ್ ಆಗಿದ್ರೂ, ಸಮ್ಯ-ಸಂದರ್ಭ ಅಂದಾಗ ದನ ಕಾಯೋದ್ರಿಂದ ಹಿಡ್ದು, ಡ್ರೈವರ್ ವರ್ಗೂ ಎಲ್ಲ ಥರ ಕೆಲ್ಸ ಮಾಡ್ದ. ಇನ್ನೊಂದು, ಭಗವಂತ ಆ ಕಾಲಕ್ಕೇ ತನಗೆ ಏನ್ ಇಷ್ಟ ಬಂತೋ ಆ ಕೆಲ್ಸ ಮಾಡ್ದ ಅನ್ನೋದು. ಸುಮ್ನೆ ತಂದೆ-ತಾಯ್ ಮಾತ್ ಕೇಳೋ, ಅಥ್ವ ಅವ್ರು-ಇವ್ರನ್ನ ನೋಡಿ ಅವ್ರ ಥರ ಆಗ್ಬೇಕು ಅಂತ ಆಗಿಲ್ಲ. ಹಾಗೇನಾದ್ರೂ ಆಗಿದ್ರೆ, ಅಂದ್ರೆ, ಅವ್ನೂ ಅವ್ರ ಅಪ್ಪನ ಥರ ದನ ಕಾಯೋವ್ನಾಗೆ ಉಳ್ಕೊಂಡು, ಡ್ರೈವರ್ ಕೆಲ್ಸ ಮಾಡ್ದೆ ಇದ್ರೆ, ಪ್ರಪಂಚಕ್ಕೆ ಭಗವದ್ಗೀತೆ ಅನ್ನೋ ಅಮೂಲ್ಯವಾದ ಗ್ನಾನಾನೇ ಸಿಗ್ತಾ ಇರ್ಲಿಲ್ಲ.

ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಇದು ವಿದ್ಯಾರ್ಥಿಗ್ಳು ಭಾಳ ಬೇಸ್ರದಿಂದ ಹೇಳೋ ಮಾತು. ಅವ್ರಿಗೆ ತಮ್ಗೇನ್ ಇಷ್ಟಾನೋ ಅದ್ನ ಮಾಡೋಕೆ ಅವ್ಕಾಶ ಸಿಗೋದೇ ಕಮ್ಮಿ, ಹಾಗೆ ಸಿಕ್ದವ್ನು ನಿಜ್ವಾಗ್ಲೂ ಪುಣ್ಯಾತ್ಮಾನೆ ಸರಿ ಅಂತ.
ಅಕಸ್ಮಾತ್ ಅಂಥಾ ಅವ್ಕಾಶ ತಂದೆ-ತಾಯಿ ಕೊಟ್ರೂ, ಅವ್ರಿಗೆ ಏನ್ ಮಾಡ್ಬೇಕು ಅಂತ ಗೊತ್ತಿಲ್ವೇ ಅನ್ನೋದೂ ಅವ್ರ ವ್ಯಥೆ.

ಸಿಸ್ಟೆಮ್ಮೆ ಸರಿ ಇಲ್ಲ ಚೊಂಬೆಶ್ವರ...
ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ...
ಮೈನ್ ಪ್ರಾಬ್ಲಮ್ ಸಿಸ್ಟಮ್ ಸರಿ ಇಲ್ಲ. ಅದ್ಕೆ ವಿದ್ಯಾರ್ಥಿ ಬೇರೆಯವ್ರ ಕಡೆ ಬೆಟ್ಟು ತೋರ್ಸಿ ಸುಮ್ನೆ ಕೂರೋಬದ್ಲು ನಮ್ ದೇಶದ್ ಪ್ರಧಾನ ಮಂತ್ರಿ ಆಗಿ ಇದ್ನೆಲ್ಲ ಬದಲ್ಸೊ ಯೋಚ್ನೇ ಮಾಡ್ತಿದಾನೆ ಅನ್ನೋ ಮಾತನ್ನ ಇಲ್ಲಿ ಕವಿ ಹೇಳ್ತಾರೆ.

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...

ಅಂತೂ ಈ ಹಾಡಿನ್ ಮೂಲ್ಕ ನಮ್ಮ ವಿದ್ಯಾರ್ಥಿಗಳ ಮನೋವೇದನೆ, ಮುಂದಾಲೋಚನೆ ಬಗ್ಗೆ ತಿಳ್ಸ್ಕೊಟ್ಟು, ಅವ್ರು ಹೇಗೆ ಇರ್ಬೇಕು ಅನ್ನೋದ್ರ ಬಗ್ಗೆ ತುಂಬ ಪ್ರ್ಯಾಕ್ಟಿಕಲ್ ಸಲ್ಯೂಶನ್ಸ್ ಕೊಟ್ಟಿರೋ ನಮ್ಮ ಭಟ್ಟ್ರಿಗೆ ಅನಂತಾನಂತ ವಂದನೆಗಳ್ನ ಹೇಳ್ಬೇಕು.

0 comments:

Post a Comment