Saturday, October 25, 2014

ನೆನಪಿನ ಪುಟಗಳಿಂದ -- Part 2

ಎಲ್ರೂ ಆರಾಮ?

ನಾನ್ ಮುಂಚಿಂಥರಾನೆ ಹೆಚ್ಚು ಕಮ್ಮಿ ಆರಾಮಾಗೇ ಇದೀನಿ. 

ಹೋದ್  ಸರ್ತಿ ಪತ್ರದಲ್ ನನ್ Paris ಪ್ರಯಾಣದ (ಪ್ರಣಯ ಅಲ್ಲ ಪ್ರಯಾಣ) ಬಗ್ಗೆ ಮತ್ತೆ ಪತ್ರ ಬರೀತೀನಿ ಅಂತ ಹೇಳಿದ್ದೆ... ಅದ್ರ ಜೊತೆ ನನ್ನ Germany ಅನುಭವಗಳನ್ನ, ಇಲ್ಲಿನ್ ವಿಶೇಷತೆಗಳನ್ನ ನಿಮ್ಜೊತೆ ಹಂಚ್ಕೊತೀನಿ ಅಂತ ಕೂಡ ಅಂದಿದ್ದೆ... ಅದಕ್ಕೆ ಈ ವಿ-ಪತ್ರ... ಈ ಸರ್ತಿ ಪಠ್ಯ ಪುಸ್ತಕದ ಭಾಷೆ ಬಿಟ್ಟು ಸ್ವಲ್ಪ ಆಡುಭಾಷೆ ಉಪ್ಯೋಗಿಸೋಕೆ ಪ್ರಯತ್ನ ಮಾಡಿದೀನಿ... 

ನಾವ್ ಶುಕ್ರವಾರ ರಾತ್ರಿ Paris ಪ್ರಯಾಣ ಶುರು ಮಾಡಿದ್ವಿ... ಇಡೀ ರಾತ್ರಿ ಪ್ರಯಾಣ ಮಾಡಿ, ನಾವು ಸರ್ಯಾಗಿ ಬೆಳಗೆ ಏಳ್ ಗಂಟೆಗೆ Paris ಮುಟ್ಟಿದ್ವಿ . ನಮ್ ಗಾಡಿ ಚಾಲಕ ನಾವ್ Paris ಒಳ್ಗೆ ಬರ್ತಿದ್ದಂಗೆ ಅಕ್ಕ-ಪಕ್ಕ ಕಾಣ್ಸೋ ಜಾಗಗಳ್ ಬಗ್ಗೆ German ಮತ್ತೆ ಆಂಗ್ಲ ಭಾಷೆಗಳಲ್ಲಿ ಹೇಳೋಕೆ ಶುರು ಮಾಡ್ದ . ಉದಾಹರಣೆಗೆ ಯಾವ್ದೋ ಸೇತುವೆ ಕಾಣ್ಸಿದ್ ತಕ್ಷಣ (ಅವ್ನಿಗೆ, ನಮ್ಗಲ್ಲಾ) ಅದು ಇನ್ನೂರ್ ವರ್ಷದ್ ಹಳೆ ಸೇತುವೆ, ಆಮೇಲೆ ಇಪ್ಪತ್ತೈದು ವರ್ಷಗಳ ಹಿಂದೆ ಅದನ್ನ ಈಗಿನ್ ಕಾಲದವ್ರು ಮತ್ತೆ ಜೀರ್ಣೋದ್ಧಾರ ಮಾಡಿ ಹೊಸ್ದಾಗಿ ಕಟ್ಟಿದಾರೆ ಅಂತಿದ್ದ. ಅವ್ನು German ಭಾಷೆ ಮುಗ್ಸಿ ಆಂಗ್ಲ ಭಾಷೆಗೆ ಬಾರೋ ಅಷ್ಟ್ಹೊತ್ಗೆ ಸೇತುವೆ ಚಾಲಕನ ಆಸನದಿಂದ ಮಧ್ಯದಲ್ಲಿ ಕೂತಿರೋವ್ರ ಆಸನದವ್ರ ಹತ್ರ ಬಂದಿರ್ತಿತ್ತು. ಅವ್ನು ತನ್ನ ಆಂಗ್ಲ ಪ್ರವಚನ ಮುಗ್ಸೋ ಅಷ್ಟೊತ್ಗೆ ಹಿಂದಿನ್ ಸೀಟ್ನವ್ರಿಗಿಂತ ಹಿಂದೆ ಹೋಗಿರ್ತಿತ್ತು. ಮೊದ್ಲು ಒಂದೆರ್ಡ್ಸರ್ತಿ ನಾವು ಕತ್ತ್ ಹಿಂದೆ ತಿರ್ಗ್ಸಿ ನೋಡ್ತಿದ್ವಿ. ಆಮೇಲೆ ಏನೋ ವದರ್ಕೊಂಡ್ ಹೋಗ್ಲಿ ಬಿಡು ಅಂತ ಸುಮ್ನೆ ಆಗ್ಬಿಟ್ವಿ. ಛಾಯಾಚಿತ್ರ ತೆಗ್ಯೋಕೆ ಪ್ರಯತ್ನ ಪಟ್ಟವ್ರ ಪಾಡಂತೂ ಕೇಳ್ಬೇಡಿ. ಸೇತುವೆ ಕಡೆ ನೋಡ್ಕೊಂಡ್ ಗುಂಡಿ ಒತ್ತಿದರೆ, ಅದು ಸೇತುವೆ ಮುಂದೆ ಇರೋ ಕಟ್ಟಡ ಚಿತ್ರ ಸೆರೆ ಹಿಡೀತಿತ್ತು. 

ಹಾಗೆ ಸುಮಾರು ಒಂದ್ ಗಂಟೆ ಕಾಲ Paris ಪರಿಚಯ ಮಾಡ್ಸಿ, ಯಾವ್ದೋ ಒಂದು ಉಪಹಾರ ಮಂದಿರದ ಮುಂದೆ ತಂದು ಗಾಡಿ ನಿಲ್ಸಿ ಚಾಲಕ ಈಗ ಎಲ್ರೂ ತಿಂಡಿ ಮುಗ್ಸಿ, ಆಮೇಲೆ ನಿಮ್ಮನ್ನೆಲ್ಲಾ ಊರ್ ಸುತ್ತೋಕೆ ಕರ್ಕೊಂಡ್ ಹೋಗ್ತೀನಿ ಅಂದ. 

ಅದಾದ ಮೇಲೆ ನಮ್ಮ ವಸತಿ ಗೃಹಕ್ಕೆ ಹೋದ್ರೆ ಅಲ್ಲಿ ನಮ್ಗೆ ಒಂದು ಆಶ್ಚರ್ಯ ಕಾದಿತ್ತು. ನಮ್ಗೆ ಅಂತ ಕಾಯ್ದಿರ್ಸಿರೋ ಕೊಠಡಿಗಳು ಇನ್ನೂ ಖಾಲಿ ಆಗಿರ್ಲಿಲ್ಲ. ಆಗ ನಮ್ ಚಾಲಾಕಿ ಚಾಲಕ ಈಗ ನಿಮಗೆಲ್ಲ ಊರ್ ಸುತ್ತಿ ಸುಸ್ತಾಗಿರ್ಬೇಕು. ನಿಮ್ಮ ಸಾಮಾನೆಲ್ಲ ಇಲ್ಲೇ ಬಿಟ್ಟು ಸೊಲ್ಪ ಏನಾದರೂ ತಿನ್ಕೊಂಡ್ ಬನ್ನಿ, ಅಷ್ಟ್ಹೊತ್ತಿಗೆ ಕೊಠಡಿ ಖಾಲಿ ಆಗಿರುತ್ತೆ, ಆಮೇಲೆ 7 ಗಂಟೆಗೆ Eiffel ಗೋಪುರಕ್ಕೆ ಕರ್ಕೊಂಡ್ ಹೋಗ್ತೀನಿ ಅಂದು ಅಲ್ಲಿಂದ ಜಾಗ ಖಾಲಿ ಮಾಡಿದ. ಸರಿ ಇನ್ನೇನ್ ಮಾಡೋದು ಅಂದ್ಕೊಂಡು ನಾವೆಲ್ಲಾ ಹಿಂದಿ, ಕನ್ನಡ, ತಮಿಳು ಭಾಷೆಗಳಲ್ಲಿ ಅವ್ನನ್ನ ಬೈಕೊಂಡು ಊಟಕ್ಕೆ ಹೊರ್ಟ್ವಿ. ಪುಣ್ಯಕ್ಕೆ ನಮ್ಗೆಲ್ಲಾ ಒಂದೆರ್ಡ್ ಭಾರತೀಯ ಉಪಹಾರ ಮಂದಿರಗಳು ಸಿಕ್ಕಿ, ಅಲ್ಲಿ ಊಟ ತಿನ್ಕೊಂಡ್ ಕೊಠಡಿಗೆ ಬಂದ್ವಿ. ಕೊಠಡೀಲಿ ಸ್ನಾನ ಮುಗ್ಸಿ ಮತ್ತೆ ನಾವೊಂದು ಐದಾರು ಜನ ನಮ್ಮ ಪಾಡಿಗೆ ನಾವು ಊರ್ ಸುತ್ತೋಣ ಅಂದ್ಕೊಂಡು Eiffel Tower ಹತ್ರ ಬಂದ್ವಿ. 

ಅಬ್ಬಾ! ಎಂಥಾ ಗೋಪುರ ಅದು!!! ಅದ್ರ ಮುಂದೆ ನಿಂತು ಕತ್ತ್ ಎತ್ತ್ದಷ್ಟೂ ಎತ್ರ ಹೋಗ್ತಾನೇ ಇತ್ತು. ಐದು ಜನ್ದಲ್ಲಿ ಮೂರ್ ಜನ ಅದ್ರ ಮೇಲೆ ಹೋಗೋಕೆ ನಿರ್ಧರ್ಸಿದ್ವಿ. ನಂಗೆ ಮೊದ್ಲೇ ಎತ್ತರದಿಂದ ಕೆಳ್ಗೆ ನೋಡೋದು ಅಂದ್ರೆ ಹೆದ್ರಿಕೆ. ಆದ್ರೂ ನಾನ್ ಕೂಡ ಆಗಿದ್ ಆಗ್ಲಿ ಅಂತ ಹೊರ್ಟೇಬಿಟ್ಟೆ. ನಾಕೂವರೆಗೆ ಸಾಲ್ನಲ್ಲಿ ನಿಂತ ನಾವು, ಚೀಟಿ ತಗೊಂಡು ಗೋಪುರದ ತುದಿ ಮುಟ್ಟಿದಾಗ ಆರೂವರೆ. ಮತ್ತದೇ ಅನುಭವ. ಅಬ್ಬಾ ಅನ್ನೋ ಅಂಥದು. ಇಷ್ಟ್ ಎತ್ತರದಲ್ಲಿ ನಾನ್ ನಿಂತಿದೀನಿ ಅನ್ನೋದನ್ನ ಒಂದ್ ಕ್ಷಣ ನಾನೇ ನಂಬೋಕ್ ಆಗ್ಲಿಲ್ಲಾ. ನಂಗಂತೂ ಅಷ್ಟು ಎತ್ತರದಿಂದ ಒಂದು ನಗರಾನ ನೋಡಿದ್ದು ಅದೇ ಮೊದಲ್ನೇ ಸರ್ತಿ. ನಾವು ಮೇಲೆ ಸೇರೋ ಅಷ್ಟ್ಹೊತ್ಗೆ  ಕಥ್ಲಾಗಿ ಇಡೀ Paris ನಗರ ವಿದ್ಯುದೀಪಗಳಿಂದ ಮಿಂಚ್ತಾ ಇತ್ತು. ಅಲ್ಲಿನ ನೋಟ ನೋಡೋಕೆ ಐದು ಕಣ್ಣು ಸಾಲ್ದು (ನಾಲ್ಕು ನನ್ದು, ನನ್ ಛಾಯಾಚಿತ್ರಗ್ರಾಹಿದು ಒಂದು). ಎಷ್ಟ್ ದೂರ ನೋಡುದ್ರೂ ನಕ್ಷತ್ರಗಳ ಥರ ಮಿನುಗ್ತಾ ಇರೋ ಕಟ್ಟಡಗ್ಳು, ರಸ್ತೆಗ್ಳು. ಗೋಪುರದ ಸುತ್ತ ಓಡಾಡೋಕೆ ಅವ್ಕಾಶ ಇದೆ. ಪ್ರತ್ಯೊಂದು ಕೋನದಿಂದ ಕಾಣ್ಸೋ ಪ್ರಮುಖ ಕಟ್ಟಡಗಳ ಮಾಹಿತಿ ಅಲ್ಲೇ ಕೊಟ್ಟಿರ್ತಾರೆ. ಸಮಯ ಇದ್ರೆ ನಿಧಾನ್ವಾಗಿ ಓದ್ಕೋಬೌದು. ಅದಲ್ದೇ ಗೋಪುರದಿಂದ ಪ್ರಪಂಚದ ಪ್ರಮುಖ ನಗರಗಳು ಎಷ್ಟ್ ದೂರ ಇವೆ ಅನ್ನೋ ಮಾಹಿತಿ ಕೂಡ ಅಲ್ಲಿ ಕೊಟ್ಟಿದಾರೆ. ಅದರ ಪ್ರಕಾರ ನಮ್ಮ ನವ ದೆಹಲಿ ಸುಮಾರು ಏಳೂ ಮುಕ್ಕಾಲ್ ಸಾವ್ರ ಕಿಲೋಮೀಟರ್ ದೂರ ಇದೆ. 

ಅಲ್ಲಿ ನೂರಾರು ಜನಗಳ ಮಧ್ಯದಲ್ಲಿ ನುಗ್ಗಿ-ನುಗ್ಗಿ ಛಾಯಾಚಿತ್ರ ತೆಗ್ಯೊಷ್ಟ್ರಲ್ಲಿ ನನ್ನ ಅಂಕೀಯ ಛಾಯಚಿತ್ರಗ್ರಾಹಿಯಲ್ಲಿರೋ ವಿದ್ಯುತ್ಕೋಶದ ಶಕ್ತಿ ಪೂರ್ತಿ ಖಾಲಿ ಆಗಿತ್ತು. ನನ್ ಸ್ನೇಹಿತನ್ ಛಾಯಾಚಿತ್ರಗ್ರಾಹೀಲಿ ಒಂದೆರ್ಡ್ ಚಿತ್ರಗಳನ್ನ ತೆಗ್ದು ಕೆಳ್ಗೆ ಭೂಮಿ ಮುಟ್ದಾಗ ಏಳೂವರೆ. ಅರ್ಧ ಗಂಟೆ ಮೇಲೆ ಇರೋಕೆ ನಾವ್ ಎರ್ಡು ಕಡೆ (ನೆಲ ಮಹಡಿಯಿಂದ ಎರಡನೇ ಮಹಡಿಗೆ ಹೋಗೋಕೆ ಒಂದ್ ಏರುವ ಯಂತ್ರ, ಅಲ್ಲಿಂದ ಮೂರನೇ ಮಹಡಿಗೆ, ಅಂದ್ರೆ ತುದಿಗೆ ಹೋಗೋಕೆ ಇನ್ನೊಂದ್ ಯಂತ್ರ) ಸಾಲುಗಳಲ್ಲಿ ನಿಂತ್ ಸಮಯ ಎರಡೂವರೆ ಗಂಟೆ. 

ಕೆಳಗೆ ಬಂದು ವಿದ್ಯುದ್ದೀಪಗಳಿಂದ ಅಲಂಕರಿಸಿದ ಗೋಪುರ ನೋಡೋವ್ರ ಕಣ್ಣಿಗೆ ಹಬ್ಬ. ಆಮೇಲೆ ನಮ್ಮನ್ ಬಿಟ್ಹೋದ ಇನ್ನಿಬ್ರನ್ನ ಹುಡುಕ್ತಾ ಎದ್ರುಗೆ ಇರೋ ದೋಣಿ ವಿಹಾರ ಕೇಂದ್ರಕ್ಕೆ ಹೋದ್ವಿ. ಅಲ್ಲೂ ಅವ್ರು ಸಿಗ್ದೇ ಇದ್ದಾಗ ನಾವು ಮೂರು ಜನ ದೋಣಿ ವಿಹಾರಕ್ಕೆ ಹೊರ್ಟ್ವಿ. ಅದು ಕೂಡ ಒಳ್ಳೆ ಅನುಭವ. Seine ನದೀಲಿ ಸಾಗೋ ಈ ದೋಣಿ ವಿಹಾರ, Paris ನಗರದ ಎಷ್ಟೊಂದ್ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮಾಡ್ಸುತ್ತೆ. ಮಾರ್ಗದಲ್ಲಿ ಕಾಣೋ ಸ್ಥಳಗಳ ಮಾಹಿತಿ ಕೊಡೋಕೆ ಒಂದ್ ಶ್ರವ್ಯ ಸಾಧನ ಇದೆ. ಅದನ್ನ ನಮ್ ಕಿವಿಗೆ ಇಟ್ಕೊಂದ್ರೆ ಅದು ನಮಗೆ ಬೇಕಾದ್ ಭಾಷೇಲಿ ಮಾತ್ರ (ಆಂಗ್ಲ, German, French, ಇತ್ಯಾದಿ) ಮಾಹಿತಿ ಕೊಡುತ್ತೆ. ಹೆಚ್ಚಿನ ವಿವರ ಬೇಕಾದ್ರೆ ಅಲ್ಲೇ ಇರೋ ಎಂಟು ಭಾಷಾ ಪಂಡಿತೆಯಾದ ಒಬ್ಳು ಮಾರ್ಗದರ್ಶಕಿನ ಕೇಳ್ಬಹುದು. ಆ ಮಾರ್ಗದಲ್ಲಿ ಒಂದ್ ಸೇತುವೆ ಇದೆ. ಅದರ್ ಕೆಳ್ಗೆ ಹೋಗ್ಬೇಕಾದ್ರೆ ಕಣ್ ಮುಚ್ಚಿ ನಮ್ಗೆ ಬೇಕಾದನ್ನ ಕೇಳ್ಕೊಂದ್ರೆ ಅದು ನಮ್ಗೆ ಸಿಗುತ್ತೆ/ ಕೆಲ್ಸ ಆಗುತ್ತಂತೆ. ನಾನ್ ಕೂಡ ಏನೋ ಕೇಳ್ಕೊಂಡೆ. 

ದೋಣಿ ವಿಹಾರ ಮುಗ್ಸಿ ರಾತ್ರಿ ವಸತಿಗೃಹದ ಪಕ್ದಲ್ಲೇ ಇರೋ ಭಾರತೀಯ ಉಪಹಾರಮಂದಿರದಲ್ಲಿ ಊಟ ಮುಗ್ಸಿ ಕೊಠಡಿ ಸೇರ್ದ್ವಿ.

ಮಾರ್ನೆ ದಿನ ಬೆಳ್ಗೆ ಎದ್ದು ನಾವೊಂದು ಐದು ಜನ ಪ್ರಪಂಚದ ಅತಿ ದೊಡ್ಡ ಕಲಾ ವಸ್ತು ಸಂಗ್ರಹಾಲಯಕ್ಕೆ ಹೊರ್ಟ್ವಿ. ಅಲ್ಲೇ ನಮ್ಮ ಮೋನಾ ಲಿಸಾ ಇರೋದು. ... 

ಪ್ರಪಂಚದ ಅತಿ ದೊಡ್ಡ ಕಲಾ ವಸ್ತು ಸಂಗ್ರಹಾಲಯದಲ್ಲಿ ನಾವು ಇರೋಕೆ ಆಗಿದ್ದು ಕೇವಲ ಒಂದೂವರೆ ಗಂಟೆ ಮಾತ್ರ. ಅಲ್ಲಿಂದ ಹೊರ್ಟು Arc de Triomphe ಹತ್ರ ಬಂದು ಒಂದೆರ್ಡು ಛಾಯಾಚಿತ್ರಗಳನ್ನ ತೆಗೆದು ಮತ್ತೆ ವಸತಿ ಗೃಹ ಸೇರೋಷ್ಟ್ರಲ್ಲಿ ನಾವು Paris ಇಂದ ಹೊರ್ಡೋ ಸಮಯ ಆಗ್ಹೋಗಿತ್ತು. ನಾವ್ ನಮ್ಮ ಸಾಮಾನ್ ಹೊತ್ಕೊಂಡು ಗಾಡಿ ಹತ್ರ ಬರೋಷ್ಟ್ರಲ್ಲಿ ನಮ್ಮ ತಂಡದವ್ರು ಕಾಯ್ತಾ ನಿಂತಿದ್ರು. ಎಲ್ ಹೋಗಿದ್ರಿ, ಯಾಕಿಷ್ಟು ತಡ ಅಂತೆಲ್ಲಾ ವಿಚಾರ್ಸ್ಕೊಂಡಾದ್ಮೇಲೆ ಗಾಡಿ ಕಡೆಗೂ ಹೊರ್ಡ್ತು. ಒಂದ್ ಗಂಟೆ ತಡವಾಗಿ, ಒಂದೂವರೆಗೆ. ನಮ್ಮ ತಂಡದವ್ರಲ್ದೇ ಅದ್ರಲ್ಲಿ ಇನ್ನು ಹತ್ತು ಜನ ಬೇರೆ ಇದ್ರು. ಅವ್ರೆಲ್ಲ ಬೈಕೊಂಡ್ರೇನೋ ಗೊತ್ತಿಲ್ಲ. 

ದಾರೀಲಿ ಬರ್ತಾ ನನ್ನ ಸಹೋದ್ಯೋಗಿಗೆ ಅವ್ಳ ದೂರವಾಣಿ Parisನಲ್ಲಿರೋ ಅಂಗ್ಡೀಲಿ ಬಿಟ್ಟಿರೋದ್ರ ಬಗ್ಗೆ ಜ್ಞಾನೋದಯ ಆಯ್ತು. ಅದ್ರ ದುರುಪಯೋಗ ತಡ್ದು ಅದನ್ನ ವಾಪಸ್ ತರೋ ದಾರಿ ಮಾಡೋ ಅಷ್ತ್ಹೊತ್ಗೆ ಮಧ್ಯಾನ ಊಟದ ಸಮ್ಯ ಆಗಿತ್ತು. ದಾರೀಲಿ ಕಚಡ ಉಪಹಾರ ಮಂದಿರದಲ್ಲಿ ಸಿಕ್ಕಿದ್ದನ್ನ ತಿಂದು ಮುಗ್ಸಿ, ಮತ್ತೆ ನಮ್ಮ ಊರು ಸೇರ್ದಾಗ ರಾತ್ರಿ ಒಂಬತ್ ಗಂಟೆ. 

ಇಲ್ಲಿಗೆ Paris ಪುರಾಣ ಮುಗೀತು. ಇಷ್ಟ್ ಹೊತ್ತು ಓದಿದ್ದಕ್ಕೆ ಧನ್ಯವಾದಗಳು. 

ಈಗ ಕೊನೇಲಿ ಒಂದೆರ್ಡು ಚಿಟಿಕೆ ಸುದ್ದಿ ಕೊಟ್ಟು ಪತ್ರಾನ ಮುಗ್ಸ್ತೀನಿ. 
1. Paris ನಮ್ಮ ಬೆಂಗ್ಳೂರ್ ಥರಾನೆ ಜನ, ಗಲೀಜು, ಎರ್ಡು ಜಾಸ್ತಿ ಇರೋ ಜಾಗ. ಎಲ್ ಬೇಕಾದ್ರಲ್ಲಿ ಉಗೀತಾ ಹೋಗ್ಬಹುದು. ಎಲ್ ಬೇಕಾದ್ರೂ ಕಸ ಎಸೀಬಹುದು. ಯಾರೂ ಕೇಳೊಲ್ಲ. 
2. Parisನಲ್ಲಿ ಭಾರತೀಯ ಉಪಹಾರ ಮಂದಿರಗಳು ಒಂದೇ ಕಡೆ ಸಾಕಷ್ಟು ಇವೆ. ಆದ್ರೆ ಇವೆಲ್ಲ ತೆಗ್ಯೋದೆ ಹನ್ನೆರ್ಡು ಗಂಟೆಗೆ. 

ಇಲ್ಲಿನ ಇನ್ನಷ್ಟು ವಿಷಯಗಳ ಜೊತೆ ನಿನ್ನೆ ಮೊನ್ನೆ ಏನ್ ಮಾಡಿದ್ವಿ ಅಂತ ಮತ್ತೆ ಬರೀತೀನಿ. 

ಅಲ್ಲಿವರ್ಗೂ ಸಂಪರ್ಕದಲ್ಲಿರಿ. 

ಶ್ರೀಕಾಂತ್

0 comments:

Post a Comment