ಮುನ್ನುಡಿ
ನಾನು ಕೆಲವು ವರ್ಷಗಳ ಹಿಂದೆ ನನ್ನ ಕಾರ್ಯನಿಮಿತ್ತವಾಗಿ ಜರ್ಮನಿ ದೇಶಕ್ಕೆ ಹೋಗಿದ್ದಾಗ ಬೆಂಗಳೂರಿನ ನನ್ನ ಸಹೋದ್ಯೋಗಿಗಳಿಗೆ ವಾರಾಂತ್ಯಗಳಲ್ಲಿ ಅಲ್ಲಿನ ಆಗುಹೋಗುಗಳ ಬಗ್ಗೆ ವಿ-ಪತ್ರ ಬರೆಯುತ್ತಿದ್ದೆ. ಅದನ್ನು ಓದಿದ ಒಬ್ಬರು travelogue ಬರಿ ಅಂತ ಸಲಹೆ ನೀಡಿದ್ದರು. ಆಗ ನಾನು ನಕ್ಕು ಸುಮ್ಮನಾಗಿದ್ದೆ.
ಆದರೆ ಈಗ ಅವುಗಳನ್ನ ಇಲ್ಲಿ ಹಾಕುತ್ತಿದ್ದೇನೆ. ಕಾರಣ? ನನ್ನ ಈ blog ತುಂಬಿಸುವುದು. ಹೌದು. ಏನಾದರೂ ಬರೀಬೇಕು, ಆದರೆ ಏನು ಬರೀಬೇಕು ಅಂತ ಯೋಚನೆ ಮಾಡುತ್ತಿದ್ದಾಗ ತಲೆಗೆ ಹೊಳೆದದ್ದು ಇದು.
ಅಲ್ಲಿದ್ದಾಗ ನಾನು ಬರೆದ ಮೂರು ಪತ್ರಗಳನ್ನ ಮೂರು postsಗಳಾಗಿ ಇಲ್ಲಿ ಹಾಕುತ್ತೇನೆ. ಇದರಲ್ಲಿ ಬರುವ ನನ್ನ ಸಹೋದ್ಯೋಗಿಗಳ ಹೆಸರನ್ನು ಉದ್ದೇಶಪೂರಕವಾಗಿ ಬದಲಾಯಿಸುತ್ತೇನೆ ಅಥವಾ ಅಪರೋಕ್ಷವಾಗಿ ಉಲ್ಲೇಖಿಸುತ್ತೇನೆ. Public domainನಲ್ಲಿ ಅವರ ಅನುಮತಿ ಇಲ್ಲದೆ ಅವರ ಹೆಸರುಗಳನ್ನ ಉಪಯೋಗಿಸುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಂತ ಅನುಮತಿ ಪಡೆಯೋಕೆ patience ಇಲ್ಲ.
ಭಾಗ ೧: ನೆನಪು
ಎಲ್ಲರಿಗೂ ನಮಸ್ಕಾರಗಳು
ನಾನು ಜರ್ಮನಿಯಲ್ಲಿ ಹೆಚ್ಹು-ಕಮ್ಮಿ ಆರಾಮಾಗಿದ್ದೀನಿ. ಬುಧವಾರದಿಂದ ಕೆಲ್ಸಾ ಶುರು ಆಗಿದೆ. ಅಲ್ಲಿವರ್ಗೂ ಗಣಕಯಂತ್ರಗಳು ಸಿಕ್ಕಿರ್ಲಿಲ್ಲ. ಇನ್ನು ಎಡೆಬಿಡದ ಕೆಲ್ಸಾ ಇರುತ್ತೆ ಅಂದ್ಕೊಂಡಿದೀವಿ. ನಾನು ಮತ್ತು ಚೆನ್ನೈನ ನನ್ನ ಸಹೋದ್ಯೋಗಿ ಒಂದು ತಂಡ. ಮಿಕ್ಕ ಇಬ್ರು ಇನ್ನೊಂದು ತಂಡ. ತಂಡ ವಿಭಜನೆ ನಮ್ಮ ಇಷ್ಟದಂತೆಯೇ ಆಗಿದೆ.
ಇಲ್ಲಿ ಬುಧವಾರ ಬಹಳ ಚಳಿ ಇತ್ತು. ಒಂದು ಅರ್ಧ ಗಂಟೆ ಹೊರ್ಗಡೆ ಇದ್ರೆ ನಾನು 65kg ತೂಕದ ಮಂಜುಗಡ್ಡೆ ಆಗ್ಬಿಡ್ತೀನೇನೋ ಅನ್ನುವಷ್ಟು ಚಳಿ. ತಾಪಮಾನ ಗರಿಷ್ಠ ಸುಮಾರು 4 ಉಷ್ಣಾಂಶ ಹಾಗು ಕನಿಷ್ಠ ಸುಮಾರು 1 ಉಷ್ಣಾಂಶ ಇತ್ತೆಂದು ಅಂತರ್ಜಾಲದಲ್ಲಿ ಓದಿದೆ.
ನಾವು ಇರುವ ವಸತಿ ಗೃಹ ಬಹಳ ಚೆನ್ನಗಿದೆ. ಚೆನ್ನೈನ ಸಹೋದ್ಯೋಗಿಯ ಶ್ರಮದಿಂದ ಅದು ಸಾಧ್ಯ ಆಯ್ತು. ವಸತಿ ಗೃಹದ ಒಡತಿ ಬಹಳ ಒಳ್ಳೇಯವಳು. ಮಾಂಸಾಹಾರಿಗಳಿಗೆ ಮೊಟ್ಟೆ ದೋಸೆ, ಸಸ್ಯಹಾರಿಗಳಿಗೆ ಸುಟ್ಟ ರೊಟ್ಟಿ, ಹಣ್ಣಿನ ರಸ ಸಿಗುತ್ತೆ. ಅದೆಲ್ಲ ತಿಂದ ನಂತರ ಒಂದು ಸಕ್ಕತ್ತಾಗಿರೋ ಕಾಫಿ. ಇಲ್ಲಿ ಇನ್ನು ಒಳ್ಳೆ ಟೀ ಸಿಕ್ಕಿಲ್ಲ. ಅದಕ್ಕೆ ನಾನು ಅದನ್ನ ಕುಡಿಯೋದನ್ನೇ ಬಿಟ್ಟಿದೇನಿ. ಪಕ್ಕದಲ್ಲೇ ತರಕಾರಿ ಹಾಗು ದಿನಸಿ ಸಿಗುವ, ಸುಂದರವಾದ ಹುಡುಗಿ ಕೆಲ್ಸಾ ಮಾಡುವ ದೊಡ್ಡ ಅಂಗಡಿ ಇದೆ. ಅಲ್ಲಿಂದ ಸಾಮಾನು ತಂದು ನಾವೇ ಏನಾದ್ರೂ ಅಡಿಗೆ ಮಾಡ್ಕೊತೀವಿ. ಇಬ್ರು ಆಂಟೀರೂ ತುಂಬಾ ಸಮಾಧಾನವಾಗಿ ರುಚಿಯಾದ ಅಡಿಗೆ ಮಾಡ್ತಾರೆ. ಅವ್ರ ಗಂಡಂದಿರ ಜೊತೆಗೆ ನಾವೂ ಪುಣ್ಯ ಮಾಡಿದ್ವಿ.
ಮಧ್ಯಾನ ಕೂಡ ಊಟ ತಿಂತೀವಿ... ಪ್ರಾಣಿಗಳ ಥರ ಸೊಪ್ಪು-ತರಕಾರಿಗಲನ್ನ. ಒಂದು ದಿನ ಅರ್ಧಂಬರ್ಧ ಬೆಂದ ಅನ್ನ-ಬೇಳೆ ಸಾರು ಕೂಡ ಸಿಕ್ಕಿತ್ತು. ಇನ್ಮೇಲಿಂದ ನಮ್ಮೂರ ಕ್ಯಾಂಟೀನ್ನಲ್ಲಿ ಸಿಗೋ ಊಟ ಚೆನ್ನಾಗಿಲ್ಲ ಅನ್ಬಾರ್ದು ಅನ್ನಿಸ್ತು.
ಕಛೇರಿಯಲ್ಲಿ ನಮಗೆ ಪ್ರತಿದಿನ ಸೇಬಿನ ರಸದ ಒಂದು ಹೆಡಿಗೆ ತಂದಿಡ್ತಾರೆ. ಯಾರು ಎಷ್ಟು ಬೇಕಾದ್ರೂ ಕುಡಿಬಹುದು. ಅದಲ್ಲದೆ ಸಂಜೆ ಏನಾದ್ರೂ ಕೆನೆಭರಿತ ಸಿಹಿ ತಿಂಡಿ ಮಾಡಿ ತಂದಿಡ್ತಾರೆ. ನಮ್ಮಮ್ಮ ನಾನ್ ಇಲ್ಲಿಂದ ಬರೋ ಬರೋಷ್ಟರಲ್ಲಿ ಹೊಟ್ಟೆ ಕರ್ಗ್ಸಿರ್ತೇನಿ, ಮದ್ವೆ ಮಾಡಿ ಮುಗ್ಸೋಣ ಅಂದ್ಕೊಂಡಿದ್ರು... ಆದ್ರೆ ಖಂಡಿತ ಹಾಗೆ ಆಗೋಲ್ಲ ಅನ್ಸುತ್ತೆ.
ಇಷ್ಟು ದೊಡ್ಡ ಪತ್ರ ಓದಿ ಸುಸ್ತಾಗಿರ್ಬೇಕು. ಕೊನೆಯಲ್ಲಿ ಇಲ್ಲಿನ ಒಂದೆರಡು ವಿಶೇಷತೆಗಳನ್ನ ಹೇಳಿ ಮುಗಿಸ್ತೇನಿ.
೧. ಇಲ್ಲಿನ ಶೇಕಡ 80%ರಷ್ಟು ಅಂಗಡಿಗಳು ಸಂಜೆ 6.30ಕ್ಕೆ ಬಾಗಿಲು ಹಾಕುತ್ತವೆ.
೨. ಕಚೇರಿಯಲ್ಲಿ ಸೇಬಿನ ಹಣ್ಣಿನ ಸೀಸೆ ಉಚಿತವಾಗಿ ಕೊಡ್ತಾರೆ. ಆದ್ರೆ ನೀರಿನ ಸೀಸೆ ದುಡ್ಡು ಕೊಟ್ಟು ಕೊಂಡುಕೋಬೇಕು.
ನಮ್ಮ ಇಡೀ ತಂಡ ವಾರಾಂತ್ಯದಲ್ಲಿ Paris ನೋಡಲು ಹೊರಟಿದ್ದೇವೆ. ಇಲ್ಲಿನ ಇನ್ನಷ್ಟು ವಿಚಾರಗಳ ಜೊತೆ ಆ ಪ್ರಯಾಣದ ಬಗ್ಗೆ ಮತ್ತೆ ಬರೆಯುತ್ತೇನೆ.
ಅಲ್ಲಿಯವರೆಗೂ ಸಂಪರ್ಕದಲ್ಲಿರಿ.
0 comments:
Post a Comment