ನಮಸ್ಕಾರ
ಏನ್ ಸಮಾಚಾರ? ಎಲ್ರೂ ಆರಾಮ?
ಜ್ವರ ವಾಸಿಯಾಯ್ತು... ನಾನು ಮತ್ತೆ ಹೆಚ್ಚು-ಕಮ್ಮಿ ಆರಾಮಾಗಿದೀನಿ... 24ನೇ ತಾರೀಖು ಬೆಂಗ್ಳೂರಿಗೆ ಬಂದು ಸೇರ್ತಿದೀನಿ... ಇದ್ವರ್ಗು ನೇರವಾಗಿ ಬೆಂಗ್ಳೂರಿಗೆ ಬರೋಕೆ ಪ್ರಯಾಣದ ಚೀಟಿ ಸಿಕ್ಕಿಲ್ಲ... ಹೈದರಾಬಾದ್ ಮೂಲಕ ಬರ್ಬೇಕಾಗ್ಬಹುದು... ಪ್ರಯಾಣದ ವಿಭಾಗದವ್ರಿಗೆ ಬುಧ್ವಾರದ್ವರ್ಗು ನೇರವಾಗಿ ಹೋಗೋ ವಿಮಾನದ ಪ್ರಯಾಣದ ಚೀಟಿಗಾಗಿ ಪ್ರಯತ್ನ ಮಾಡಿ, ಇಲ್ಲ ಅಂದ್ರೆ ವಿಧಿ ಇಲ್ಲ, ಹೈದರಾಬಾದೋ, ಚೆನ್ನಯ್ಯೋ ನೋಡೋಣ ಅಂದಿದೀನಿ...
ಹೋದ್ಸರ್ತಿ ಪತ್ರದಲ್ಲಿ ಹೇಳ್ದಂತೆ ಈ ಪತ್ರದಲ್ಲಿ ನನ್ನ Frankfurt, Feldberg ಅನುಭವಗಳ ಜೊತೆ ನಿನ್ನೆ ಹಾಗು ಇವತ್ತು (ಇಲ್ಲಿ ಇನ್ನು ಭಾನುವಾರ ರಾತ್ರಿ) ನಾವು ಅನಿರೀಕ್ಷಿತವಾಗಿ ಮಾಡಿದ Prague ಪ್ರವಾಸದ ಬಗೆ ಕೂಡ ಹೇಳ್ತೀನಿ... ಪತ್ರ ಜಾಸ್ತಿ ಏನ್ ದೊಡ್ದಾಗಿರೊಲ್ಲ...
ಕಳೆದ ಶನಿವಾರ ನಾವು ಯಾವ್ದಾದ್ರೂ ಒಂದು ದೊಡ್ಡ ನಗರ ನೋಡೋಣ ಅಂತ Frankfurtಗೆ ಹೋಗಿದ್ವಿ... ಅಲ್ಲಿ ಒಂದು ಪಾಕಿಸ್ತಾನಿ ಉಪಹಾರ ಮಂದಿರದಲ್ಲಿ ಏನೋ ತಿಂದು Romer ಅನ್ನೋ ಜಾಗಕ್ಕೆ ಹೋರ್ಟ್ವಿ... Romer ಒಂದು ಚಿಕ್ಕ ಚೊಕ್ಕ ಜಾಗ... ಅದರ ಸುತ್ತ-ಮುತ್ತ ಕೆಲವು ಪ್ರೇಕ್ಷಣೀಯ ಸ್ಥಳಗಳಿದ್ರೂ ನಾವು ಅದನ್ನ ನೋಡೋಕೆ ಹೋಗ್ಲಿಲ್ಲ... ಯಾಕೆ ಅಂತ ನನ್ಗೂ ಗೊತ್ತಿಲ್ಲ... ಸುಮ್ನೆ ಪಕ್ದಲ್ಲೇ ಇದ್ದ ಒಂದು ನದಿ, ಹಾಗು ಅದರ ಸೇತುವೆ ನೋಡ್ಕೊಂಡು ಜನ ಸೇರೋ ನಗರದ ಮಧ್ಯ ಪ್ರದೇಶಕ್ಕೆ ಹೋದ್ವಿ... ಜನ ಇರೋ ಕಡೆ ಅಂಗ್ಡೀಗ್ಳು ಇದ್ವು... ನಾವು ಐದು ಜನ ಎರ್ಡ್ ಅಂಗ್ಡೀಗೆ ನುಗ್ಗಿದ್ವಿ...
ಭಾನ್ವಾರ Feldbergಗೆ ಹೋಗಿದ್ವಿ... ನಾವಿರೋ ಜಾಗದಿಂದ ಸುಮಾರು ನಾಲ್ಕು ಗಂಟೆ ಪ್ರಯಾಣ ಅಲ್ಲಿಗೆ... ಹೋಗಿ ಸೇರ್ದಾಗ್ಲೆ 3.30 ಆಗಿತ್ತು... Feldberg ಅನ್ನೋದು ಕರಿ ಕಾಡು (Black Forest) ಅನ್ನೋ ಪ್ರದೇಶದ ಹಿಮದಿಂದ ಕೂಡಿದ ಒಂದು ಜಾಗ... ನೋಡೋಕೆ ಚೆನ್ನಾಗಿದೆ... ನನ್ನ ಜೀವನದಲ್ಲಿ ಮೊದಲ್ನೇ ಬಾರಿ ಹಿಮವತ್ಪರ್ವತ ನೋಡಿದ್ದು... ಅಲ್ಲಿ 8-10 ವರ್ಷದ ಪುಟ್ಟ ಮಕ್ಕಳು ಹಿಮದಲ್ಲಿ ಜಾರ್ತಿದ್ರು (skiing) ... ನಮ್ಮಲ್ಲಾದ್ರ್ರೆ ಆ ವಯಸಿನ ಮಕ್ಳನ್ನ ರಸ್ತೆಗೆ ಬಿಡೋಕೆ ಹೆದರ್ಕೊತೀವಿ... ಅಲ್ಲಿ ಅವ್ರು ದೊಡ್ಡವರ ಮಧ್ಯೆ ಯಾರ ಸಹಾಯ ಇಲ್ದೆ ಎಷ್ಟ್ ಧೈರ್ಯವಾಗಿ ಆಟ ಆಡ್ತಿದ್ರು... ನಾವು ಆ ಪರ್ವತನ ಸೊಲ್ಪ ಏರೋ ಅಷ್ಟ್ ಹೊತ್ಗೆ ಆ ಥಂಡೀಗೆ ನಮ್ಮ ಪಾದಗಳು ಮರಗಟ್ಟಿರುವಂತೆ ಅನ್ನಿಸ್ತು... ಸರಿ ಇನ್ನ ಆಗೋಲ್ಲ ಅಂತ ಕೆಳ್ಗೆ ಇಳ್ದು, ಜಾಗ ಖಾಲಿ ಮಾಡಿದ್ವಿ...
ನಿನ್ನೆ ಇವತ್ತು Czech ದೇಶದ Prague ನಗರದ ಪ್ರವಾಸ ಮಾಡಿದ್ವಿ... ಮೊದ್ಲೇ ಹೇಳ್ದಂಗೆ ಇದು ಸೊಲ್ಪ ಅನಿರೀಕ್ಷಿತವಾದ ಪ್ರವಾಸ... Venice ನಗರದ ಪ್ರವಾಸ ಮಾಡ್ಬೇಕು ಅಂದ್ಕೊಂಡಿದ್ದ ನಮ್ಗೆ, ಅದು ಸಾಧ್ಯವಾಗ್ದೆ ಇದ್ದಾಗ ಇದು ಸಿಕ್ತು... ಗುರವಾರ ನಿರ್ಧಾರ ಮಾಡಿ, ಶುಕ್ರವಾರ ರಾತ್ರಿ ಪ್ರಯಾಣ ಬೆಳ್ಸಿದ್ವಿ... Prague (ಅಥ್ವಾ ಅಲ್ಲಿನವ್ರು ಅದನ್ನ ಕರೆಯುವಂತೆ Praha) ಭೂಗೋಳದಲ್ಲಿ ಒಂದು ನಗರವಾಗಿದ್ರೂ, ನಮಗೆಲ್ರಿಗೂ ಅನ್ಸಿದ್ದು ಅದು ಒಂದು ವಸ್ತುಸಂಗ್ರಹಾಲಯ ಅಂತ... ಪ್ರಪಂಚದ ಅತ್ಯಂತ ಸುಂದರ ನಗರಗಳಲ್ಲಿ ಒಂದಾಗಿರುವ Pragueನಲ್ಲಿರುವ ಪ್ರತ್ಯೊಂದು ಕಟ್ಟಡದ ಹಿಂದೆಯೂ ಬಹುಶಃ ಒಂದು ಕಥೆ ಇದೆ ಅನ್ಸುತ್ತೆ... ಛಾಯಾಚಿತ್ರ ತೆಗ್ಯೋಣ ಅಂದ್ರೆ ಯಾವ್ದನ್ನ ತೆಗ್ಯೋದು ಯಾವ್ದನ್ನ ಬಿಡೋದು ಅಂತ ಗೊತ್ತಾಗ್ಲಿಲ್ಲ... ಇಲ್ಲಿನ ಎಲ್ಲ ಪ್ರೇಕ್ಷಣೀಯ ಸ್ಥಳಗಳು ಒಂದೇ ಕಡೆ ಇರೋದ್ರಿಂದ ನಾವು ನಡ್ಕೊಂಡೇ ಸುತ್ಬೇಕು... ನಗರ ಕೂಡ ಅಂತಾ ದೊಡ್ದಾಗಿಲ್ಲ... ಪ್ರೇಕ್ಷಣೀಯ ಸ್ಥಳಗಳನ್ನ ನೋಡಿ ಮುಗ್ಸಿದ್ರೆ ಇಡೀ ನಗರ ನೋಡಿ ಮುಗ್ಸಿದಂತೆ... ಇಲ್ಲಿ ಪ್ರಪಂಚದ ಅತಿ ದೊಡ್ಡ ಕೋಟೆ (Castle) ಇದೆ... ಇಲ್ಲಿ ಈಗ ಈ ದೇಶದ ರಾಷ್ಟ್ರಪತಿಗಳು ವಾಸವಾಗಿದಾರೆ... ನಮ್ಮ ಮಾರ್ಗದರ್ಶಕಿ ಆ ಕೋಟೆಯ ಪ್ರಮುಖ ಸ್ಥಳಗಳನ್ನ ತೋರ್ಸಿ, ನನ್ತ್ರ ಕೋಟೆ ಕೆಳ್ಗೆ ಇಳ್ದು ಐತಿಹಾಸಿಕ Charles ಸೇತುವೆ ಮೇಲೆ ಕರ್ಕೊಂಡು ಹೋಗಿ, ಊಟಕ್ಕೆ ಇಲ್ಲಿನ ಸಾಂಪ್ರದಾಯಿಕ ಊಟ ಸಿಗುವ ಒಂದು ಉಪಹಾರ ಮಂದಿರಕ್ಕೆ ಕರ್ಕೊಂಡು ಹೋದ್ಲು... ಆದ್ರೆ ಅಲ್ಲಿ ಸಸ್ಯಹಾರಿಗಳಿಗೆ ಆಲೂಗಡ್ಡೆ ಹಾಗು ಈರುಳ್ಳಿ ತಿಳಿಸಾರು (soup) ಬಿಟ್ರೆ ಏನೂ ಇರ್ಲಿಲ್ಲ... ನಾನು ಅದನ್ನ ಕುಡಿದು, ಸೊಪ್ಪು-ಸದೆ ತಿಂದೆ.... ನಮ್ಮ ತಂಡದ ಇನ್ನಿಬ್ರು ಬಿಸಿ ದ್ರಾಕ್ಷಾರಸ (wine) ಕೂಡ ಕುಡಿದ್ರು... ಊಟ ಮುಗಿದ ಮೇಲೆ ನಮ್ಮ ಮಾರ್ಗದರ್ಶಕಿ ನಗರದ ವ್ಯಾಪಾರಿ ಮಳಿಗೆಗಳಿರುವ ಜಾಗಕ್ಕೆ ಕರೆತಂದು... ಅಲ್ಲಿಂದ ವಸತಿ ಗೃಹಕ್ಕೆ ಹೋಗುವ ದಾರಿ ತೋರ್ಸಿ ಹೊರ್ಟ್ ಹೋದ್ಲು.. ಆಮೇಲೆ ನಾವು ಬಿಲದಿಂದ ತಪ್ಪಿಸ್ಕೊಂಡ ಇಲಿಗಳಂತೆ ದಿಕ್ಕಿಗೊಬ್ರು ಹೊರ್ಟ್ವಿ.
ಇಲ್ಲಿ ಗಲ್ಲಿಗೊಂದು ವಸ್ತುಸಂಗ್ರಹಾಲಯ, ಎರ್ಡು ರಂಗಮಂದಿರ... ನಾವು ಕೂಡ ಒಂದು ಗೇಯರೂಪಕ (Opera) ನೋಡೋಣ ಅಂತ ಹೋದ್ವಿ... ಆದ್ರೆ ನಾವು ಆ ರಂಗಮಂದಿರ ಸೇರೋ ಅಷ್ಟ್ ಹೊತ್ಗೆ ಪ್ರವೇಶ ಚೀಟಿ ನೀಡುವ ಸಮಯ ಮುಗ್ದಿತ್ತು... ಅವತ್ತು Romeo Juliet ಪ್ರದರ್ಶನವಿತ್ತು... ನಾವು ನಮ್ಮ ಬಾಳಸಂಗಾತಿಗಳೊಡನೆ ಬರದಿದ್ದ ಕಾರಣ ಅದನ್ನು ನೋಡುವ ಭಾಗ್ಯ ನಮಗೆ ಸಿಗ್ಲಿಲ್ಲ ಅನ್ಸುತ್ತೆ...
ಇಲ್ಲಿ ಪ್ರದರ್ಶನ ಪೆಟ್ಟಿಗೆಯಲ್ಲಿ (showcase) ಇಡೋಕೆ ಒಳ್ಳೊಳ್ಳೆ ವಸ್ತುಗಳು ಸಿಗುತ್ತವೆ... ದರದ ಬಗ್ಗೆ ಹಾಗು ತೂಕದ ಬಗ್ಗೆ ಚಿಂತೆ ಇಲ್ದಿದ್ರೆ ಇಲ್ಲಿನ ಪ್ರಸಿದ್ಧ ಸ್ಫಟಿಕದ (crystal) ವಸ್ತುಗಳನ್ನ ಕೊಂಡ್ಕೊಬಹುದು... ನಂಗೆ ಇವೆರ್ಡ್ರ ಬಗ್ಗೆನೂ ಯೋಚ್ನೆ ಇದ್ದಿದ್ದ್ರಿಂದ ನಾನು ಅದನ್ನ ಬಿಟ್ಟು ಸುಮಾರು ಆಟದ ಸಾಮಾನುಗಳನ್ನ ತಗೊಂಡೆ... ಒಂದ್ ಅಂಗ್ಡೀಲಂತು ನಾನ್ ಏನ್ ತಗೋಳೋದು ಏನ್ ಬಿಡೋದು ಅಂತ ಗೊತ್ತಾಗ್ಲಿಲ್ಲ.. ಅಷ್ಟು ಥರಾವರಿ ಆಟದ ಸಾಮಾನುಗಳು... ಬೆಂಗ್ಳೂರ್ನಲ್ಲಿ ನಾನು ನೋಡ್ದೆ ಇರೋ ಅಂಥವನ್ನ ತಗೊಂಡು ಮಿಕ್ಕವನ್ನ ಬೇರೆಯವ್ರಿಗೆ ಬಿಟ್ಟು ಬಂದೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಒಂದು ಸಂಗೀತ ಸಾಧನ ತರೋಕೆ ಹೇಳಿದ್ದ... ಇಲ್ಲಿ ಒಂದೇ ಒಂದು ಅಂಗ್ಡೀಲಿ ಅದು ಸಿಗ್ತಿತ್ತು... ಆದ್ರೆ ಅದು ಶನ್ವಾರ-ಭಾನ್ವಾರ ಎರ್ಡ್ ದಿನಾನು ಬಾಗಿಲು ತೆಗ್ದಿರ್ಲಿಲ್ಲ... ಕ್ಷಮಿಸು ಗುರುವೇ... ಬೈಕೋ ಬೇಕು ಅನ್ಸಿದ್ರೆ ನೀನು ನಂಗೆ ಧಾರ್ವಾಡ್ ಪೇಡ ಕೊಡ್ದೇ ಇರೋದನ್ನ ಜ್ಞಾಪಿಸ್ಕೋ... ನಿಂಗೆ ಕೋಪ ನಂಗೆ ಬೈಗಳು ಎರಡು ಕಮ್ಮಿ ಆಗುತ್ತೆ... ;-)
ಒಟ್ಟಾರೆಯಾಗಿ ನಮ್ಮ ಈ ಪ್ರವಾಸ ಬಹಳ ಚೆನ್ನಾಗಿತ್ತು... ಇಲ್ಲಿಂದ ಹೋಗ್ತಾ ನಮ್ಮ ಜೊತೆ ಇದ್ದ ಮಲ್ಲು ತಂಡ ರಾತ್ರಿ ಎರ್ಡಾದ್ರು ಮಲ್ಗ್ದೇ ಹರ್ಟೆ ಹೊಡಿತೀದ್ರು ಅನ್ನೋದ್ ಬಿಟ್ರೆ ಮಿಕ್ಕಿದ್ದೆಲ್ಲ ಚೆನ್ನಾಗಿತ್ತು... ಒಳ್ಳೆ ವಸತಿ ಸೌಲಭ್ಯ, ಒಳ್ಳೆ ವಾಹನ ಚಾಲಕ, ಒಳ್ಳೆ ಮಾರ್ಗದರ್ಶಕಿ... ಒಳ್ಳೆ ಚಳಿ... ನಾವ್ ಮೂರೂ ಜನ ಮತ್ತೆ ನಮ್ಮ ಸಂಗಾತಿಗಳೊಡನೆ ಮತ್ತೆ ಇಲ್ಲಿಗೆ ಬರ್ಬೇಕು ಅನ್ನೋ ಮನಸ್ಸಿನೊಂದಿಗೆ ಈ ನಗರವೆಂಬ ವಸ್ತುಸಂಗ್ರಹಾಲಯಕ್ಕೆ ವಿದಾಯ ಹೇಳಿದ್ವಿ...
ಕೊನೇಲಿ ಎಂದಿನಂತೆ ಚಿಟಿಕೆ ಸುದ್ದಿ:
1. ನಾವು Feldbergನಲ್ಲಿ Cheese Burgerನಲ್ಲಿ ದನದ ಮಾಂಸ (beef) ಇತ್ತು... ಇಲ್ಲಿನ ಜನರಿಗೆ ಅದು ಎಷ್ಟು ಸಾಮಾನ್ಯ ಅಂದ್ರೆ ಅವ್ರು ಅದನ್ನ ಉಲ್ಲೇಖಿಸೋದೂ ಇಲ್ಲ...
2. Czech ದೇಶದ ರಾಷ್ಟ್ರೀಯ ಆಹಾರ ಹಂದಿ ಮಾಂಸ (pork)...
3. Prague ಕೋಟೆಯ ಕಾವಲುಗಾರರು ಕಾರ್ಯನಿರತವಾಗಿರುವಾಗ ಸಾರ್ವಜನಿಕರು ಅವರನ್ನ ಮುಟ್ಟಬಾರದು... ಮುಟ್ಟಿದವರ ಮೇಲೆ ತಮ್ಮ ಆಯುಧ ಉಪಯೋಗಿಸುವ ಅಧಿಕಾರ ಅವ್ರಿಗೆ ಇದೆ...
4. Bata ಸಂಸ್ಥೆ ಮೂಲತಃ Czech ದೇಶದ್ದು... ಇಲ್ಲಿ ಕೂಡ ಅವ್ರು ಮಾರುವ ವಸ್ತುಗಳ ಬೆಲೆ 399, 499,999,1099, ಈ ರೀತೀನೇ ಇದೆ.
5. ಹೈದರಾಬಾದಿನಂತೆ ನಾನು ಇಲ್ಲಿ ಕೂಡ ನನ್ನ ಸಂಚಾರಿ ದೂರವಾಣಿ ಕಳ್ಕೊಂಡೆ.
ಇಲ್ಲಿಗೆ ಈ ಪತ್ರ ಮುಗೀತು... ನನ್ನ ಕೊನೆ ಐದು ದಿನಗಳ ಬಗ್ಗೆ ಏನಾದ್ರೂ ವಿಶೇಷ ಇದ್ರೆ ಅಲ್ಲಿಗೆ ಬಂದು ಹಂಚ್ಕೊತೇನಿ...
ಅಲ್ಲಿವರ್ಗೂ ಸಂಪರ್ಕದಲ್ಲಿರಿ...
ಶ್ರೀಕಾಂತ್